ವಿಷಯಕ್ಕೆ ಹೋಗಿ

ಸಂಬಂಧ ಬೇರೂರುವ ಮುನ್ನ


ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ.
ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ.
ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ.
ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿಶಾಲವಾಗಿ ಕನಸಿನ ಲೋಕಕ್ಕೆ ತೇಲುತ್ತಾರೆ. ಅಲ್ಲಿ ನೋವಿಗೂ ಒಂದಷ್ಟು ಜಾಗವಿದೆ. ಕಣ್ಣಲ್ಲಿ ಕಂಬನಿ ಹನಿಯೊಡೆಯುವ ಭಾವುಕ ಮಾತು, ಅದಕ್ಕೆ ಉತ್ತರ ಕೊಡದ ನೀರ್ಲಿಪ್ತತೆ, ನಿರ್ಭಾವುಕ ಮನಸ್ಸಿಗೆ ತುಸು ಹುಳಿ ಹಿಂಡಿದಂತಾಗುತ್ತದೆ. ದಿನದ ವೇಳಾಪಟ್ಟಿ ಅದಲು ಬದಲಾಗಿ ಹಸಿವಿನ ಚಿಂತೆ ಇಲ್ಲದೆ ಬರೀ ಮಾತಿನ ಕಂತೆಗೆ ಹಾತೊರೆಯುತ್ತದೆ.
ಇನ್ನೇನೂ ಮತ್ತಷ್ಟು ಆತ್ಮೀಯರಾಗುವ ಹೊತ್ತಿಗೆ ಅದೇ ಕಾಣದ ವಿಧಿಯೊಂದು ಆ ಸಂಬಂಧಗಳಿಗೆ ಭವಿಷ್ಯ ಎಂಬ ಅಡ್ಡಗಾಲು ಹಾಕಿಬಿಡುತ್ತದೆ. ಅಗಲಿಕೆಯಂಬ ಶಬ್ದ ಕೇಳಿ ಮನವು ಮಡುಗಟ್ಟಿ ದುಃಖದಿಂದ ನರ್ತಿಸತೊಡಗುತ್ತದೆ. ಎದೆಯ ತುಂಬಾ ಏಕಾಂಗಿತನದ ಜಿಡ್ಡುಹಿಡಿಯಲು ಆರಂಭವಾಗುತ್ತದೆ. ಆ ಒಂದೆರಡು ದಿನದ ನೋವು ಹೆಪ್ಪುಗಟ್ಟಿ ಮೃದುವಾದ ಹೃದಯದ ತುಂಬೆಲ್ಲಾ ಗೀರಿದಂತಾಗುತ್ತದೆ. ಮೂರನೇ ದಿನ ಆಕಸ್ಮಿಕವಾಗಿಯೋ ಅಥವಾ ಅನಿವಾರ್ಯವೋ ಮೊಬೈಲ್ ನಾಟ್ ರಿಚಬಲ್ ಆಗಿರುತ್ತೆ. ಮತ್ತೆ ಅಲ್ಲಿಗೆ ಅವರ್ಯಾರೋ? ಇವರ್ಯಾರೋ...? ಆದರೆ ನೆನಪುಗಳು ಮಾತ್ರ ಅವರವರದೇ...!

ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ -    ಸಂಗಮೇಶ ಡಿಗ್ಗಿ 8553550012