ವಿಷಯಕ್ಕೆ ಹೋಗಿ

ಜನರಲ್ ಬೋಗಿಯಂಬ ವೈವಿಧ್ಯಮಯ ತಾಣ...


‘ಯುವರ್ ಅಟೇಕ್ಷನ್ ಪ್ಲೀಸ್ ಹುಬ್ಬಳ್ಳಿ ಟೂ ಸೋಲಾಪೂರ ಪ್ಯಾಸೆಂಜರ್ ಟ್ರೇನ್ ಅರೈವಲ್” ಗಾನ ಮೊಳಗಿಸುತ್ತಾ ಮೈಕ್ ಎಚ್ಚರಿಸುತ್ತಿದ್ದಂತೆ ತಮ್ಮ ತಮ್ಮ ಬ್ಯಾಗ್‍ಗಳನ್ನು ಎತ್ತಿಕೊಂಡು, ಮಕ್ಕಳ ಕೈ ಹಿಡಿದು, ಜೊತೆ ಬಂದವರಿಗೆ ಗುಡ್ ಬೈ ಹೇಳಿ ಬೋಗಿಯೊಳಗೆ ಕಾಲಿಡುವ ಮಂದಿ ಇರುವೆಗಳು ಸಕ್ಕರೆಗೆ ಮುತ್ತಿಕ್ಕುವಂತೆ ಕಾಣುತ್ತದೆ.
ಕೆಲಸದ ಬೇರೆ ಊರಿಗೆ ತೆರಳುವವರು, ಅಪ್ಪಅಮ್ಮನನ್ನು ಕಾಣಲು ತೆರಳುವವು, ಹೆಂಡತಿಯ ಊರಿಗೆ, ಸ್ನೇಹಿತರ ಮಧುವೆ ಮುಂಜಿಗೆ, ಇಲ್ಲಾ ಸಂಬಂಧಗಳನ್ನು ಕಡಿದುಕೊಂಡು ಪರವೂರಿನಲ್ಲಿ ನೆಲೆ ಕಾಣಲು, ಹಲವಾರು ಕಾರಣಗಳನ್ನು ಇಟ್ಟುಕೊಂಡು ಬಂದ ಪ್ರಯಾಣಿಕರು ಸೀಟು ಹಿಡಿಯುವ ಧಾವಂತದಲ್ಲಿ ಇದ್ದರೆ ಕಂಕಳಲ್ಲಿ ಕುಳಿತ ಮಗು ಬೆರಗುಗಣ್ಣಿನಿಂದ ಕಿಟಕಿಯತ್ತ ಕಣ್ಣು ಹಾಯಿಸುತ್ತದೆ.
ಜಾತೀಗೀತಿಯ ಬಂಧನವನ್ನು ಕಾಣದ ಏಕೈಕ ಸ್ಥಳವೆಂದರೆ ಅದು ರೈಲು ಬೋಗಿ. ಪಕ್ಕದವನ ಜಾತಿಯನ್ನು ಕೇಳದೆ ಮೈ ಅಂಟಿಸಿಕೊಂಡು ನಿಟ್ಟುಸಿರು ಬಿಡುತ್ತಾ ತಮ್ಮದೆ ಯೋಚನಾ ಲಹರಿಯಲ್ಲಿ ಮುಳುಗಿ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಾರೆ.
ಸುತ್ತಲು ಒಮ್ಮೆ ಕಣ್ಣು ಹಾಯಿಸಿದರೆ ಸೂಟುಬೂಟು ಹಾಕಿಕೊಂಡ ಶ್ರೀಮಂತ, ದೊಗಳೆ ಅಂಗಿ ಧರಿಸಿದ ಮದ್ಯಮ ಕುಟುಂಬ ವ್ಯಕ್ತಿ, ಧೊತರಕ್ಕೆ ನೀಲಿಬಳಿದುಕೊಂಡ ಹಳ್ಳಯ ಹಿರಿಯ, ದಾಡಿ ಬಿಟ್ಟ ಮುಲ್ಲಾ, ಆಗ ತಾನೆ ಮಧುವೆಯಾದ ಜೋಡಿಗಳು, ಹಳ್ಳಿ ಹೆಂಗಸರು, ಚಿಕ್ಕಮಕ್ಕಳು, ಅಷ್ಟೆ ಅಲ್ಲದೆ ಬಿಸ್ಕಿಟ್ ಮಾರುವವವರು, ಬಿಕ್ಷುಕರು, ಚಪ್ಪಾಳೆ ತಟ್ಟುವ ಮಂಗಳಮುಖಿಯರು, ತಂದೆತಾಯಿಗಳಿಂದ ದೂರಾಗಿ ಇತರರೆಡೆಗೆ ಹಣದ ಆಸೆಗಾಗಿ ಕೈ ಚಾಚುವ ಮಕ್ಕಳು ಹಲವು ವೈವಿದ್ಯಮಯವಾದ ಜನಾಂಗದ ಪರಿಚಯವಾಗುತ್ತದೆ. ಅಲ್ಲೆಲ್ಲೂ ಜೋಡಿಹಕ್ಕಿಗಳು ಜೀವನದ ಗೂಡುಕಟ್ಟಲು ಕನಸನ್ನು ಹೆಣೆಯುವಲ್ಲಿ ಬ್ಯುಸಿಯಾಗಿರುತ್ತಾರೆ.
ಸೀಟಿಗಾಗಿ ಮೊದ ಮೊದಲು ಜಗಳವಾಡುತ್ತಿದ್ದವರು ಊರು ಸಮೀಪಿಸುತಿಂದ್ದತೆ ಒಬ್ಬರಿಗೊಬ್ಬರು ಅಂಟಿಕೊಂಡು ಕಷ್ಟಸುಖಗಳನ್ನು ಸಮನಾಗಿ ಶೇರ್ ಮಾಡುತ್ತಿರುತ್ತಾರೆ. ಮಗದೊಬ್ಬ ಟವೆಲ್‍ನ್ನು ಹಾಸಿ ಕಾಲ ಬಳಿ ಯಾವುದೇ ಮುಜುಗರವಿಲ್ಲದೆ ನಿದ್ದೆ ಮಾಡುತ್ತಾ ಪಯಣಿಸುತ್ತಾನೆ. ಮತ್ತೊಬ್ಬರ ಕಾಲು ಇನ್ನೊಬ್ಬರಿಗೆ ತಲೆದಿಂಬಾಗಿ ಮಾರ್ಪಾಡಾಗುತ್ತದೆ. ಯಾರೋ ಮಾಡಿದ ಕಕ್ಕಸ್ಸಿಗೆ ಮಗದೊಬ್ಬರು ನೀರು ಸುರಿಯುತ್ತಾರೆ. ಅದರ ಒಳಗೆ ಟಿಕೆಟ್ ಇಲ್ಲದೇ ಪಯಣ ಮಾಡಿದರೂ ನಡೆಯುತ್ತೆ ಎನ್ನುವ ಧಿಮಾಕಿನ ಪಯಣಿಗರು ಇರುತ್ತಾರೆ.
ಅಲ್ಲಿ ವಡೆ, ಶೇಂಗಾ ವಠಾಟಿ ಬರ್ಜರಿಯಾಗಿ ವ್ಯಾಪಾರ ಕುದುರಿಸುತ್ತವೆ. ಪ್ರತಿಸ್ಟಾಪ್‍ಗೂ ಹೊಸ ಬಗೆಯ ಜನರು ಹತ್ತುತ್ತಾರೆ. ಇಳಿಯುತ್ತಾರೆ. ಕ್ರಾಸಿಂಗ್‍ನ ವೇಳೆಯಲ್ಲಿ ಟೀ ಗುಟುಕರಿಸಿ ಬಾಗಿಲ ಬಳಿ ಜೋತು ಬಿದ್ದು, ಕಿಟಕಿಯೊಳಗೆ ಮೂತಿ ತುರುಕಿಸಿ ಎದರು ಬರುವ ಟ್ರೇನ್‍ಗಾಗಿ ಕಾತರಿಸುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..?

ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿಳಿಸಿತು. ಮನೆಯ ಹೊರಗೆ ಕಾಲಿಡದಂತಹ ರೌರವ ನರಕದ ವಾಸನೆ ಮೂಗಿಗೆ ಬಡಿಯುತಿತ್ತು. ಮೂರು ದಿನಗಳ ಕಾಲ ವಿಧಿಸಿದ ಕರ್ಫ್ಯೂ ಹೊಸವರ್ಷದ ಸಂತಸವನ್ನು ಕಿತ್ತುಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಶಾಂತಿ ಸೌರ್ಹಾದದ ನಗರ ಈ ದುಷ್ಕೃತ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ತಹಶೀಲ್ದಾರ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಪ್ರತಿಯೊಬ್ಬರಲ್ಲೂ ಭಯ ಮನೆಮಾಡಿತು. ನೋಡ ನೋಡುತ್ತಿದ್ದಂತೆ ಬಸ್ನ ಗಾಜುಗಳು ಪುಡಿಯಾದವು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಹಿಂದೆಂದೂ ಕಾಣದ ಪೊಲೀಸ್ ಬೂಟಿನ ಸಪ್ಪಳ ಗಲ್ಲಿಗಲ್ಲಿಗಳಲ್ಲ್ಲಿ ಮಾರ್ದನಿಸತೊಡಗಿತು.
ಎಲ್ಲರಲ್ಲೂ ಒಂದೇ ಕೂಗು. ಧ್ವಜ ಹಾರಿಸಿದವರನ್ನು ಬಂಧಿಸಬೇಕು. ಧ್ವಜ ಹಾರಿಸಿದವರು ಮುಸ್ಲಿಮ್ ಸಮುದಾಯದವರು, ಅವರನ್ನು ತಕ್ಷಣ ವಿಚಾರಿಸಿ ಬಂಧಿಸಬೇಕು. ಎಲ್ಲೆಡೆಯೂ ಕೇಸರಿಯ ಶಾಲು, ಹಣೆಯಲ್ಲಿ ಸಿಂಧೂರ ಇಟ್ಟುಕೊಂಡವರು ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಇನ್ನೂ ಬಲಿಯದ ಮುಖಂಡರು. ಇತ್ತ ಮುಸ್ಲಿಮ್ ಬಾಂಧವರಲ್ಲಿ ತಲ್ಲಣದ ಜೊತೆ ಅಭದ್ರತೆಯ ಭಾವ ಮೂಡಿತು.
ಇಡೀ ನಗರವೆಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡತೊಡಗಿತು. ಆದರೆ ಧ್ವಜ ಹಾರಿಸಿದವ…

ಮೊನಚಾದ ಉಗುರು ಬೆನ್ನ ಮೇಲೆ ರಕ್ತ ಉಕ್ಕಿಸಿದೆ

ಒಂದು ಪ್ಲೇಟ್ ತಿಂಡಿ
ಬೈಟೂ ಕಾಫೀ
ಒಂದು ಒಳ್ಳೆ ಟೈಂಪಾಸ್
ಇಷ್ಟಿದ್ದರೆ ಸಾಕಲ್ಲ ನೀನಿರಲು


ಯಾರಿಗೆ ಗೊತ್ತು
ನಾನು ಹಸಿದಿದ್ದೆನೆಂದು

ಹಸಿಬಿಸಿ ಕನಸೂರಿನಿಂದೆದ್ದು
ನೀಟಾಗಿ ಮಡಚಲು ಬೆಡ್‍ಶೀಟ್
ಪಾಪವೆನಿಸುವದು
ಅಯ್ಯೋ!
ಅಲ್ಲಿ ಮುದುಡಿಕೊಂಡು ಮಲಗಿದ ಕನಸುಗಳಿವೆ
ಎಬ್ಬಿಸಲು ನನ್ನಿಂದಾಗುವುದಿಲ್ಲ
ಕೂಗಾಡುವ ಅಮ್ಮನಂತೆ

ಬಂದೇ ಡಾರ್ಲಿಂಗ್ ಒಂದೇ ನಿಮಿಷ
ಬೆರಳ ತುದಿಯಿಂದ ಮೇಘಸಂದೇಶ
ಕ್ವಿಕ್ ಎಂದು ಪಟಾಪಟ್
ಒನ್ ಮಿನಿಟ್ ನ್ಯೂಡಲ್ಸ್ ಅಲ್ಲ ಇದು
ಹದಮಾಡಿ ಬೇಯಿಸಿದ ಒಗ್ಗರಣೆಗೆ
ರುಚಿ ಹಾಕಿದ ಸಾಂಬಾರಿನಂತೆ ಜೀವನ

ನಿನಗಷ್ಟು ತಿಳಿಯಲಿಲ್ಲವೇ
ಸ್ನಾನ ಮಾಡಿ ರೆಡಿಯಾಗುವುದು ನನಗೆ ಬೋರ್ ಎಂದು!

ಐ ಯಾಮ್ ವೇಟಿಂಗ್ ಪಾರ್ ಯು ಒನ್ ಹವರ್
ಹತ್ತಾರು ಸಂದೇಶ
ಗೂಡಿನಿಂದ ಹಾರಿದವು ಪಟಪಟನೆ ಪಾರಿವಾಳದಂತೆ

ಏನು ಬೇಕು ಸರ್?
ಮಾಣಿಗೆ ಉತ್ತರ ಹೇಳಿ ಸಾಕಾಯಿತು
ಒಬ್ರು ಬರ್ತಾಯಿದಾರೆ ಪ್ಲೀಜ್ ವ್ಹೇಟ್ ಎಂದು
ಟಕ್ ಎಂದು ಗ್ಲಾಸ್ ಕುಕ್ಕಿ ಹೋದ
ಅವನಿಗದು ರೂಢಿಯಾಗಿ ಬಿಟ್ಟಿದೆ ಎನಿಸುತ್ತದೆ
ಕಪ್ಪು ಕಿವಿಯಲ್ಲಿ ತುರುಕಿರುವ ಹತ್ತಿಯುಂಡೆ ನೋಡಿದರೆ

ಅಗೋ ಬಂದೇಬಿಟ್ಟಿ
ಬ್ಯೂಟಿಪಾರ್ಲರ್‍ನಿಂದ ಹುಟ್ಟಿದಂತೆ
ಅಸಹನೀಯವಾದ ಸಿಟ್ಟು ಮುದುರಿ ಮಲಗಿತು
ಮುಗುಳ್ನಗುತ್ತಾ ಐಸ್-ಕ್ರೀಂ ಆರ್ಡರ್ ಮಾಡಿ
ಸ್ವಾರಿ ಕಣೋ ಎಂದಾಗ

ಅರೇ
ಬಿಲ್ಲು ನೀನು ಕೊಟ್ಟೆ!
ಕೆಲ್ಸದ ಬಗ್ಗೆ ತಲೆಕೆಡಿಸಿಕೊ
ಅಪ್ಪ ಗಂಡು ನೋಡಿದ್ದಾರೆ
ನಾಳೆನೆ ಹೋಗಬೇಕು
ನಿನ್ ಮೀಟ್ ಮಾಡೋದು ಕಷ್ಟ ಕಣೋ
ಇನ್ನು ಏನೇನೋ...

ನಿಂತ ಜಾಗದ…

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ
ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ

ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ
ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ

ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ
ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ

ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ
ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ

ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ
ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ

ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ
ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ


-    ಸಂಗಮೇಶ ಡಿಗ್ಗಿ
8553550012