ವಿಷಯಕ್ಕೆ ಹೋಗಿ

ಚಡ್ಡಿದೋಸ್ತ್ ಚಂದಪ್ಪನ ದರುಶನ..!


ಹುಣ್ಣಿಮೆಯ ರಾತ್ರಿಯಲ್ಲಿ ಒಂಟಿಯಾಗಿ ನಡೆಯುತ್ತಿರುವಾಗ ನನಗೆ ಗೊತ್ತಿಲ್ಲದೆ ನನ್ನನ್ನು ಹಿಂಬಾಲಿಸಿ ಬರುತಿದ್ದ ಚಂದಪ್ಪ ನನ್ನ ಚಡ್ಡಿದೋಸ್ತ್ ಆಗಿ ಬಹಳ ವರ್ಷವೇ ಆಗಿದೆ. ಅಜ್ಜಿ ಹೇಳುತ್ತಿದ್ದ ಮೊಲ ಮತ್ತು ಚಂದಪ್ಪನ ಕಥೆ ನನ್ನೆದೆಯೊಳಗೆ ಅಚ್ಚಾಗಿ ಉಳಿದು ತುಕ್ಕು ಹಿಡಿಯುವ ಸ್ಟೇಜ್‍ಗೆ ಬಂದು ನಿಂತಿದೆ. ಹೇಗಾದರೂ ಸರಿಯೇ ಮೊಲ ಜಿಗಿದಾಡುವದನ್ನು ನೋಡಲೇಬೇಕು ಎಂಬ ತವಕದಿಂದ ಅನೇಕ ಹುಣ್ಣಿಮೆಗಳನ್ನು ಮಾಳಿಗೆಯ ಮೇಲೆ ಆಚರಿಸಿದ್ದೆನೆ. ಚಳಿಯಲ್ಲಿ ನಡುಗಿ ಹಿಪ್ಪೆಯಾಗಿ ಹೋದರು ಮೊಲ ಮಾತ್ರ ಕದಲದೆ ‘ಸ್ಟಾಚು’ ತರ ಸ್ಟಿಲ್ ಆಗಿರತಿತ್ತು.
ಶಾಲೆಯಲ್ಲಿ ಮಾಸ್ತಾರ ಪಾಠ ಮಾಡುವಾಗ ಚಂದಪ್ಪನ ಮೇಲೆ ಮಾನವ ಕಾಲಿಟ್ಟ ಚಿತ್ರವನ್ನು ತೋರಿಸಿ ವಿವಿರಿಸುತಿದ್ದಾಗ ನನಗೆ ಆ ಬೂಟುಗಾಲು ಬಲಗಾಲಿನದೋ ಎಡಗಾಲಿನದೂ ಎನ್ನುವ ಪ್ರಶ್ನೆ ಉದ್ಭವಿಸಿ ಕೇಳಿದಾಗ ಆಕಡೆಯಿಂದ ಬಂದ ಕೈ ನನ್ನ ಮುಸುಡಿಯನ್ನು ಕೆಂಪಗಾಗಿಸಿ ದಪ್ಪಮಾಡಿಬಿಟ್ಟಿತು.
ಪುಸ್ತಕದಲ್ಲಿ ಆತನ ನಾನಾ ಬಗೆಯ ಚಿತ್ರಗಳನ್ನು ನೋಡುತ್ತಾ, ಅಜ್ಜಿಯ ಕಥೆಗಳಿಂದ ಪ್ರೇರಣೆಯಾಗಿ, ಮಾಯಾಲೋಕದ ಕಿನ್ನರಿಗಳ ಆಟದ ಅಂಗಳವಾಗಿರುವ ಚಂದಪ್ಪನನ್ನು ಆತನ ಬೆನ್ನು, ಕೈ, ಕಾಲುಗಳನ್ನು ಸೂಕ್ಷ್ಮವಾಗಿ ನೋಡಬೇಕು ಎನ್ನುವ ಕೂತುಹಲ ನನ್ನನ್ನು ಅನೇಕ ಸಲ ಜೀವ ಹಿಂಡಿಸುತಿತ್ತು.
ಚಂದಪ್ಪ ಕೆಲವೊಬ್ಬರಿಗೆ ಪ್ರೀತಿಯ ಗೆಳೆಯ, ಕೆಲವರಿಗೆ ಒಲುಮೆಯ ಪ್ರಿಯತಮ, ಚಿಕ್ಕ ಮಕ್ಕಳಿಗೆ ಪ್ರೀತಿಯ ಚಂದಮಾಮ, ತಾಯಿಂದಿರಿಗೆ ಮಕ್ಕಳನ್ನು ಉಣಿಸಲು ಇರುವ ಸಾಧನ, ವಿರಹಿಗಳಿಗೆ ಹೊಟ್ಟೆಕಿಚ್ಚು, ಪ್ರೇಮಿಗಳಿಗೆ ತಮ್ಮ ಪ್ರೀತಿಪಾತ್ರದವರ ಮುಖಗಳನ್ನು ಕಾಣುವ ಕನ್ನಡಿ, ವಿಜ್ಞಾನಿಗಳಿಗೆ ಧೂಳ್ಮಣ್ಣಿನ ಉಂಡೆ. ಕವಿಗಳಿಗೆ ಸ್ಪೂರ್ತಿಯ ಸಿಂಚನ, ಭೂಮಿಗೆ ಅದು ಬರೀ ಉಪಗ್ರಹ.
ಗ್ರಹಣ ಹಿಡಿಯುವ ಸಂದರ್ಭದಲ್ಲಿ ರಾಹುಕೇತುಗಳು ಚಂದಮಾಮಮನನ್ನು ತಿಂದು ಹಾಕುತ್ತಾರೆ ಎಂದು ಅಜ್ಜಿ ಕಥೆ ಹೇಳಿದಾಗ ನನಗೆ ಈ ರಾಹುಕೇತುಗಳು ಭಯಂಕರ ರಾಕ್ಷಸರಂತೆ ಕಂಡರು. ಅವತ್ತು ಗ್ರಹಣ ಹಿಡಿಯುವಾಗ ಸೂಪರ್‍ಮ್ಯಾನ್ ಬಂದು ಈ ರಾಹುಕೇತುಗಳನ್ನು ಸಾಯಿಸಿ ಚಂದಪ್ಪನನ್ನು ರಕ್ಷಿಸಬಾರದೇ ಎಂದು ಡಿಡಿ ಒನ್ ಚಾನಲ್ ಮುಂದೆ ಊದಿನಕಡ್ಡಿಯ ನೈವಿದ್ಯೆ ಇಡುತ್ತಿದ್ದೆ. ಆದರೆ ಅದೆ ಚಾನಲ್‍ನ ವಾರ್ತೆಗಳಲ್ಲಿ ಚಂದಪ್ಪ ಕರಗಿಹೋಗುತ್ತಿದ್ದುದನ್ನು ಕಾಟನ್ ಸಾರಿ ತೊಟ್ಟ ಆಂಟಿ ನುಲಿದು ಹೇಳುತ್ತಿದ್ದಳು.
ಅವಾಗಿನಿಂದ ಚಂದಪ್ಪನನ್ನು ನೋಡಬೇಕೆನ್ನುವ ಕಾತರವಿತ್ತು. ಅವತ್ತು ಕವಿವಿಯ ಪ್ರಾದೇಶಿಕ ಕೇಂದ್ರದಲ್ಲಿ ‘ಕನ್ನಡದಲ್ಲಿ ವಿಜ್ಞಾನದ ಬರವಣಿಗೆ’ ಕಾರ್ಯಗಾರದಲ್ಲಿ ಭಾಗವಹಿಸಿದಾಗ ಅಂತಹ ಸುರ್ವಣ ಅವಕಾಶ ಒದಗಿಬಂತು.
7 ಗಂಟೆ ಹೊಡೆಯುತಿದ್ದಂತೆ ಎಲ್ಲರೂ ಟೆರಸ್‍ಗೆ ಹಾಜರಾಗಿ ಆಕಾಶ ನೋಡತೊಡಗಿದೆವು. ಬರೀ ಕತ್ತಲು, ಅಲಲ್ಲಿ ಚುಕ್ಕೆಗಳ ಕಾರುಭಾರು, ಮೋಡಗಳ ಹಾವಳಿಯಿಂದ ತಪ್ಪಿಸಿಕೊಳ್ಳುಲು ಹವಣಿಸುತಿದ್ದ ಚಂದಪ್ಪ.
ಗುಂಡಗೆ ಬ್ಯಾರಲ್‍ನಂತೆ ತಗಡಿನಿಂದ ಮಾಡಿದ ಡಬ್ಬಿಯೊಳಗೆ ಮಾಸ್ತಾರ ಮೊದಲು ಕಣ್ಣು ತುರುಕಿಸಿ ಅದೇನೆನೂ ತಿರುಗಿ ಬರ್ರಿ ನೋಡಬರ್ರಿ ಅಂದಾಗ ಹುಡುಗರೆಲ್ಲರು ಹುಯ್ಯಿದುಯ್ಯಿ ಅಂತ ಕುರಿದೊಡ್ಡಿಗಳ ಸಾಮ್ಯಾಜ್ಯದಂತೆ ನೂಕುನುಗ್ಗಲು ಮಾಡಿತೊಡಗಿದರು. ಇಷ್ಟು ವರ್ಷ ಕಾದ ನಾನು ಬರೀ ಐದು ನಿಮಿಷ ಕಾದು ಸಾವಕಾಶವಾಗಿ ಚಂದಪ್ಪನನ್ನು ನೋಡಬೇಕು ಎಂದು ಲಾಸ್ಟ್‍ಲಿಸ್ಟ್‍ನ ಲಾಸ್ಟ್ ಪರ್ಸನ್ ಆಗಿ ನಿಂತೆ. ಒಬ್ಬೊಬ್ಬರಾಗಿ ಬಗ್ಗಿ ನೋಡಿ ಹೋದಾಗ ಅದೇನೂ ಸ್ವರ್ಗ ಇಣುಕಿ ನೋಡಿದವರಂತೆ ಒಬ್ಬರಿಗೊಬ್ಬರು ಕಟ್ಟುಕಥೆಗಳನ್ನು ಹೇಳುತ್ತಿದ್ದರು. ನನ್ನ ಪಾಳಿ ಬಂದಾಗ ಮನದೊಳೆಗೆ ಅದೇನೋ ದುಗುಡ ಶುರುವಾಯಿತು. ‘ಮಗಧೀರ’ ಸಿನಮಾದ ಹೀರೋನಿಗ ಆದ ಪುನರ್ಜನದ ಅನುಭವದ ರೀತಿ.
ತಗಡು ಡಬ್ಬಿಯ ನಳಿಕೆಗೆ ಕಣ್ಣಾಡಿಸಿದಾಗ ವಿಸ್ಮಯ..! ನಾನು ಚಂದಪ್ಪನ ಅಂಗಳದಲ್ಲಿ ಇಳಿದು ಅದರ ನೆಲವನ್ನು ನೋಡುತಿದ್ದೇನೆ. ಅದು ಪಕ್ಕಾ ಸಣ್ಣ ಹುಡುಗ ವಾಂತಿ ಮಾಡಿದ ನೆಲದ ತರ ಕಾಣಿಸಿತು. ಮತ್ತೆ ನನಗೇನೂ ಬೇಕಾದ್ದು ಹುಡುಕಿದೆ ಸಿಗಲೇ ಇಲ್ಲ, ಅಜ್ಜಿ ಹೇಳುತ್ತಿದ್ದ ಮೊಲ. ಮೋಸ್ಟಲಿ ಅದು ಅಡಗಿ ಕುಂತಿರಬೇಕು ಎಂದು ಇನ್ನು ಜೂಮ್ ಮಾಡಿದಾಗ ಅನೇಕ ಪ್ಲೇಟ್‍ಗಳು ಚಲ್ಲಾಪಿಲ್ಲಿಯಾದಂತ ದೃಶ್ಯ ಕಂಡಿತು. ಅವುಗಳಿಗೆ ಚಂದಪ್ಪನ ಕಲೆಗಳು ಅಂತಾರೆ ಎಂದು ನಮ್ಮ ಮಾಸ್ತಾರ ಹೇಳಿದಾಗ ಕಾವ್ಯದಲ್ಲಿ ಸುಂದರವಾಗಿ ವರ್ಣನೆಗೊಂಡ ಚಂದಪ್ಪನಿಗೂ ಮೊಡವೆಗಳು ಬಂದಿವೆ ಎಂದು ಅರ್ಥವಾಯಿತು.
ಮತ್ತೆ ಮೊಲ ಎಲ್ಲಿಗೆ ಹೋಯಿತು?
ಬಹುಶಃ ಚಂದಪ್ಪನ ಮ್ಯಾಲ ಹೋದ ಮನುಷ್ಯ ಹಸಿವಾಗಿ ತಿನ್ನಲಿಕ್ಕೆ ತರಕಾರಿ ಸಿಗಲಿಲ್ಲ ಎಂದು ಮೊಲವನ್ನು ಬೇಟೆಯಾಡಿ ತಿಂದಿರಬಹುದೇ, ಅಲ್ಲಿ ನೀರು ಇಲ್ಲ ಎಂದು ಮೊಲ ಬೇರೆ ಗ್ರಹಕ್ಕೆ ಶಿಪ್ಟ್ ಆಗಿರಬಹುದೇ ಎನ್ನುವ ಕೊರಕಲು ಪ್ರಶ್ನೆಗಳು ಮೆದುಳನ್ನು ತಿನ್ನತೊಡಗಿದವು.
ಭೂಮಿಗೆ ಬೆಳಕು ನೀಡುವ ಚಂದಪ್ಪನ ಮೇಲೆ ಲೈಟಿನ ಕಂಬ ಇರಲೇಇಲ್ಲ. ಕೆ.ಇ.ಬಿ ಅಂತೂ ಕಾಣಲೆ ಇಲ್ಲ ಮತ್ತ ಅದಕ ಕರೆಂಟ್ ಹ್ಯಾಂಗ್ ಸಪ್ಲೈ ಆಗತಾದ ಅಂತ ತಲೆಯಲ್ಲಿ ಹುಳಬಿಟ್ಟು ಮಾಸ್ತಾರನ್ನು ಕೇಳಿದಾಗ ‘ನಿಮ್ಮಪ್ಪ ಚಿಮುಣಾ ಹಚ್‍ಕೋತಾ ಕುಂತಿರತಾನ’ ಅಂತ ಉತ್ತರ ಕೊಟ್ಟರು.
ಕಿನ್ನರರು ಈಜಾಡುವ ಚಿನ್ನದ ಕೊಳ, ಬಂಗಾರದ ಅರಮನೆ, ಮಾಯಾಪ್ರಪಂಚ ನೋಡುವ ನನ್ನ ಬಹುವರ್ಷಗಳ ಆಸೆ ಹೊತ್ತಿದ್ದೆ. ಇಲ್ಲಿ ನೋಡಿದರೆ ಬರೀ ಹಿಟ್ಟು ಚಲ್ಲಿದ ನೆಲ. ‘ನಮ್ಮಜ್ಜಿ ಪಿಂಡ’ ಅಕಿ ನನಗ ಸುಳ್ಳ ಕತಿ ಹೇಳ್ಯಾಳೆನು ಅಂತ ಅನುಮಾನ ಬಂದು ಬೊಚ್ಚುಬಾಯಿ ಮುದುಕಿ ಮೇಲೆ ಸಿಟ್ಟು ಬಂತು. ಪೋನ್ ಮಾಡಿ ಯಾಕ ಸುಳ್ಳು ಹೇಳಿದಿ ನಿನ್ನ ಮೇಲೆ  ಸಿಟ್ಟ ಬಂದಾದ ಅಂತ ಬೈದರೆ ‘ಸಿಟ್ಟು ಬಂದ್ರ ಹಿಟ್ಟು ಮುಕ್ಕು’ ಅಂತ ವೇದೋಫನಿಷತ್‍ಗಳನ್ನು ಉದುರಿಸಲು ಶುರು ಮಾಡಿದಳು.
ಚಂದಪ್ಪನ ಬಗ್ಗೆ ಅದೇನೋ ಹುಚ್ಚು ಕಲ್ಪನೆಗಳನ್ನು ಇಟ್ಟುಕೊಂಡ ನನಗೆ ಅವತ್ತು ಬರೀ ನಿರಾಶೆಯಾಯಿತು.
ಸಿದ್ದಾರ್ಥ ಬುದ್ದನಾದದ್ದು ಈ ಪೂರ್ಣಚಂದ್ರನ ದರುಶನದಿಂದಲ್ಲವೇ..? ನನ್ನನ್ನು ನಾನು ಸಂಪೂರ್ಣವಾಗಿ ಅರಿತಿದ್ದು ಇವನ ಗೆಳತನ ಮಾಡಿದಾಗ. ನನ್ನ ಈ ಎರಡು ವರ್ಷದ ಜೊತೆಗಾರನಾಗಿ ಚಂದಪ್ಪ ಯಾವಾಗಲೂ ನನ್ನ ಬೆನ್ನ ಹಿಂದೆಯೇ ನಿಂತಿದ್ದಾನೆ. ನಮ್ಮಿಬ್ಬರ ನಡುವೆ ಅನೇಕ ಮಾತುಕಥೆಗಳು ನಡೆದಿವೆ. ಬೇಸರವಾದಾಗ ಯಾವಾಗಲೂ ‘ಜೊತೆಗಿರುವನು’. ಖುಷಿಯಿಂದ ಇರಲು ಅವನೊಬ್ಬನೆ ಸಾಕು ನನಗೆ.
ದುಡ್ಡು, ಲವ್ವು, ಅಂಹಕಾರ, ಪ್ಯಾಶನ್ ಇತ್ಯಾದಿಗಳ ಹಂಗಿಲ್ಲದೆ ಅವನೊಟ್ಟಿಗೆ ದೋಸ್ತಿ ಬೆಳೆಸಿದ ನನಗೆ ಈ ಜಗದ ಮಾನವರ ವರ್ತನೆ ತಲೆ ಚಿಟ್ಟು ಹಿಡಿಸಿದೆ. ಬರೀ ಸ್ವಾರ್ಥಿಗಳು, ಕಪಟಿಗಳು, ಮಾನವರನ್ನು ಹಣದಂತೆ ನೋಡುವ ಕಳ್ಳ ಖದೀಮರು. ಆದರೆ ಚಂದಪ್ಪ ಹಾಗೇ ಅಲ್ಲ. ಎಲ್ಲಾ ಕಡೆಗೂ ಸಮನಾಗಿ ಬೆಳಕು ಹಂಚುವ ಮಹಾ ‘ಮಗಧೀರ’ ಆತ.
ನನ್ನ ಚಂದಪ್ಪನಿಗಾಗಿ ನನ್ನ ರಾತ್ರಿಯ ಬಹುಪಾಲು ನಿದ್ದೆಯನ್ನು ಹಾಳುಮಾಡಿದ್ದೆನೆ. ಕೆಲವೊಮ್ಮ ಟೈವಾಕ್ ಗುಡ್ಡದ ಮಾಮೂಲಿ ಜಾಗದಲ್ಲಿ ಮಲಗಿ ಚಂದಪ್ಪನನ್ನು ಬೆಳಗಿನ ಜಾವ 3 ರವರೆಗೆ ಜ್ವರ ಬಂದರೂ ನೋಡುತ್ತಾ ಮಲಗಿದ್ದು ಉಂಟು. ಇದು ನನಗೂ ಚಂದಪ್ಪನಿಗೂ ಇರುವ ನಂಟು.
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ