ವಿಷಯಕ್ಕೆ ಹೋಗಿ

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ.
ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ.
ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ.
ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ.
ಕೊಟ್ಟಿಗೆಯಲ್ಲಿ ಧೂಳು ಬಡಿದುಕೊಂಡ ನೇಗಿಲು, ಬಾರುಕೋಲು, ಕೆಲಸವಿಲ್ಲದೆ ಮಲಗಿದ್ದ ರಾಮ-ಲಕ್ಷ್ಮಣ ಹೆಸರಿನ ಎತ್ತುಗಳು ತಯಾರಾಗಿ ನಿಲ್ಲುತ್ತವೆ ಭೂಮಿಯ ಉದರಕ್ಕೆ ಕಾಳು ಹರಡಲು. ಕಾಳು ಬಸಿರೊಡೆದು ಸಸಿಯಾಗಲು ಜಡಿದು ಬರುವ ಮಳೆ ನೆರವಾಗಲು ಹವಣಿಸುತ್ತದೆ.
ಮಳೆ ಅಂದ್ರೆ ಎಲ್ಲರಿಗೂ ಇಷ್ಟ.
ನನಗೂ....
ಹೃದಯಕ್ಕೆ ಬರಗಾಲ ಬಿದ್ದ ಸಮಯದಲ್ಲಿ ಸುರಿದ ಸೊನೆಮಳೆಯೊಂದಿಗೆ ಮುನಿಸಿಕೊಳ್ಳುತ್ತಲೆ, ಅಪ್ಪಿಕೊಳ್ಳುತ್ತಾ, ಮುದ್ದಾಡುತ್ತಾ, ತನುಮನವನ್ನು ಅರ್ಪಿಸಿಕೊಳ್ಳಲು ತುದಿಗಾಲ ಮೇಲೆ ನಿಂತ ಸಮಯ. ನೋಡನೋಡುತ್ತಲೆ ಸುರಿದ ಮಳೆಗೆ ಮೈಯೊಡ್ಡಿ ಆಲಿಕಲ್ಲುಗಳನ್ನು ಬೊಗಸೆಗಟ್ಟಲೆ ಹೆಕ್ಕಿ ನನ್ನವಳಿಗೆ ಕೊಡುತ್ತಿದ್ದ ದಿನಗಳಿಗೆ ಕಾತರಿಸುತಿದ್ದ ಸಮಯದಲ್ಲಿ ಬಿರುಸಾಗಿ ಸುರಿದ ಮಳೆಯಲ್ಲಿ ಪುಟ್ಟಪೊರನಂತೆ ಅಲೆದಾಡಿ ಶೀತ,ಜ್ವರ ಬಂದು ಅಪ್ಪನ ಕೈಲಿ ಹೊಡೆಸಿಕೊಂಡ ಆ ದಿನಗಳು ನಿಜಕ್ಕೂ ಚಂದ.
ಹಿತ್ತಲ ಮನೆಯ ಬಾಗಿಲಿಂದ ತಪ್ಪಿಸಿಕೊಂಡು ‘ಬಾರೋ ಬಾರೋ ಮಳೆರಾಯ’ ಹಾಡನ್ನು ಗುನುಗುತ್ತಾ ನೆನೆದು ಒಬ್ಬರಿಗೊಬ್ಬರು ‘ಸಕ್ಕಸ್‍ಸುರಗಿ’ ಆಟವಾಡುವಾಗ ಶಾಲೆಯಲ್ಲಿ ಕೊಟ್ಟ ಹೋಂವರ್ಕ್, ಮನೆ ಯಾವುದು ನೆನಪಾಗುತ್ತಿರಲಿಲ್ಲ. ಎಲ್ಲಿಂದಲೋ ಬಂದ ಅವ್ವ ಬೆನ್ನಿಗೆ ಗುದ್ದಿದ ಮೇಲೆಯೇ ಮಳೆಯಾಟ ಬಂದ್...! ಅವತ್ತು ಮನೆಯಲ್ಲಿ ಬರೀ ಬೈಗುಳಗಳ ಮಳೆ..!
ಮೂಲೆ ಸೇರಿ ಏಕಾಂಗಿಯಾಗಿ ಬಸವಳಿದು ಬಿದ್ದ ಕೊಡೆಯೊಂದು ಹೂವಿನಂತೆ ಅರಳಿ ನಿಲ್ಲಲು ಮಳೆ ಬೇಕೆಬೇಕು. ಅಲ್ಲಲ್ಲಿ ತೂತುಬಿದ್ದು ಹಾಳಾಗಿದ್ದರೆ ಕೆಂಪು ಬಟ್ಟೆಯ ತುಣುಕಿನಿಂದ ಹೊಲಿಗೆ ಹಾಕಿದಾಗ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಅಜ್ಜನ ಸಂಗಾತಿಯಾಗಿರುವ ಛತ್ರಿಯಂತೂ ದುರಸ್ತಿಯಿಂದ ಕೂಡಿ ಕೋಲಿನ ಕೆಲಸಕ್ಕೆ ರಾಜಿನಾಮೆ ನೀಡಲು ರೆಡಿಯಾಗುತ್ತದೆ. ತಲೆಗೊಂದರಂತೆ ಕೊಡೆ ಕೊಳ್ಳಲು ಚಿಕ್ಕಪ್ಪ ಶನಿವಾರದ ಸಂತೆಗೆ ಹಾಜರಾಗುತ್ತಾನೆ. ಸುರಿಯುವ ಮೊಂಡು ಮಳೆಯಲ್ಲಿ ಕೊಡೆ ಹಿಡಿದುಕೊಂಡು.
ಮಳೆಯ ಸಂಗಡ ಹರಿದು ಬಂದ ನೀರು ಹಳ್ಳದಲ್ಲಿ ಕೂಡಿ, ನದಿಯಾಗಿ, ಸಾಗರದಲ್ಲಿ ಲೀನವಾಗಿ ಆವಿಯಾಗಿ ಮತ್ತೆ ಭೂಮಿಗೆ ಬರಲು ತುದಿಗಾಲಿನಲ್ಲಿ ನಿಂತಿರುತ್ತದೆ.
ಮಳೆ ಯಾರಿಗೆ ಯಾಕೆ ಇಷ್ಟ :
ಚಿಕ್ಕಮಕ್ಕಳಿಗೆ :
 ಸುರಿಯುವ ಸೋನೆ ಮಳೆಯಲ್ಲಿ ನೆನೆಯುವ ಆಸೆ. ನೀಲಿ, ಕೆಂಪು, ಹಸಿರು ನಾನಾ ತರಹದ ಬಣ್ಣ ಬಣ್ಣದ ಹಾಳೆಗಳಿಂದ ಕಾಗದದ ದೋಣಿಗಳನ್ನು ತೇಲಿಬಿಡುವ ಆಸೆ. ಮನೆಯ ಮಾಳಿಗೆಯ ಕಿಂಡಿಯಲ್ಲಿ ಸುರಿಯುವ ರಭಸದ ನೀರಿಗೆ ಬರೀ ಬತ್ತಲೆಯಾಗಿ ಮೈಯೊಡ್ಡುವ ಆಸೆ. ಮೊಣಕಾಲವರೆಗೂ ನಿಂತ ನೀರಿನ ಜೊತೆ ಚಲ್ಲಾಟವಾಡುವ ಆಸೆ. ಮರಳಿನ ಮೇಲೆ ಗುಬ್ಬಿಗೂಡು ಕಟ್ಟಿ ಚಂದದ ಪುಟ್ಟ ಆಣೆಕಟ್ಟು ಕಟ್ಟಿ ಎಲ್ಲಿಂದಲೂ ಹಿಡಿದು ತಂದೆ ಮಳೆಹುಳುವಿನ ಮರಿ, ಕಪ್ಪೆಮರಿ ತಂದು ಕಣ್ಣರಳಿಸಿ ನೋಡುವ ಆಸೆ. ಇದ್ಯಾವುದಕ್ಕೂ ಬಿಡದೆ ಕಾಡಿಸುವ ಅಪ್ಪನ ಮೇಲೆ ಆಗಾಗ ಉಚಿತವಾಗಿ ಸಿಟ್ಟಾಗುವ ಆಸೆ ಸಂದರ್ಭ ಒದಗುತ್ತದೆ.

ಇನ್ನು ಪ್ರೇಮಿಗಳಿಗೆ :
ನಲ್ಲೆಯ ಕಿರುಬೆರಳನ್ನು ಹಿಡಿದು ಸಾಲುಮರದ ದಾರಿಗುಂಟ ಮೈಚಳಿ ಬಿಟ್ಟು ಒಬ್ಬರಿಗೊಬ್ಬರು ಅಂಟಿಕೊಂಡು ಅಪ್ಪಿಕೊಂಡು ಮುತ್ತಿನ ಮಳೆ ಸುರಿಸುವ ಆಟ ಇಷ್ಟ. ದಾರಿಯಲ್ಲಿ ಸಿಗುವ ಗುಲ್‍ಮೊಹರ್ ಗಿಡದ ಕೆಳಗೆ ಕುಳಿತು ಕಣ್ಣಿನಲ್ಲಿ ಕಣ್ಣುಸೇರಿಸಿ ಮೌನವಾಗಿ ನೋಡುವಾಗ ದಡಲ್ ಎಂದು ಬಂದಪ್ಪಳಿಸಿದ ಸಿಡಿಲಿನ ಸದ್ದಿಗೆ ಒಬ್ಬರಿಗೊಬ್ಬರು ಅಪ್ಪಿಕೊಂಡು ಕಡೆಗೆ ನಾಚಿಕೆಯಿಂದ ನಕ್ಕು ಸುಮ್ಮನಾಗುವ ಆಟ ಇಷ್ಟ. ಹಾದಿಗುಂಟ ನಡೆಯುವಾಗ ಕೆಂಪು ಬಣ್ಣದ ಕೊಡೆಯನ್ನು ತಿರುಗಿಸುತ್ತಾ ಹನಿಗಳ ಜೊತೆ ಚಲ್ಲಾಟವಾಡುವ ಆಟ ಇಷ್ಟ. ಮಳೆಯಿಂದ ನೆನೆದು ಚಳಿಯಾಗಿ ಬಿಸಿಯುಸಿರ ಬಯಕೆ ಕಟ್ಟೆಯೊಡೆಯುವ ಸಮಯದಲ್ಲಿ ಜಗದ ಪರಿವೆಯಿಲ್ಲದೆ ಒಂದಾಗುವ ಆಟದಲ್ಲಿ ದೂರದಲ್ಲೆಲ್ಲೂ ಅಣಕಿ ನೋಡುವ ಕಾಮನಬಿಲ್ಲನ್ನು ಮರೆತು ಬಣ್ಣಬಣ್ಣಗಳ ಭಾವದಲ್ಲಿ ಮಿಂದು ಬೆಚ್ಚಗಾಗುವ ಆಸೆ.

ದೊಡ್ಡವರಿಗೆ :
ಮಳೆಸುರಿಯುವಾಗ ಬಿಸಿಬಿಸಿ ಗರಿಗರಿ ಹಪ್ಪಳ,ಸಂಡಿಗೆ ಮಾಡಿ ಮಕ್ಕಳಿಗೆ ಉಣಬಡಿಸುವದಾಸೆ. ತುಟಿ ಸುಡುವ ಚಹಾ ಕುಡಿಯುವ ಆಸೆ. ಬಿಡದೆ ಧೋ ಎಂದು ಸುರಿಯುವ ಮಳೆಗೆ ಮನೆಯ ಹೆಂಚು ಸರಿಮಾಡಿಕೊಂಡು ಮನೆಯನ್ನು ಬೆಚ್ಚಗಾಗಿ ಇಡುವ ಕೆಲಸ. ಹಿತ್ತಲಿನಲ್ಲಿನ ಕಟ್ಟಿಗೆಗಳು ನೆನೆಯದಂತೆ ಇಡಲು ತೆಂಗಿನ ಗರಿಗಳನ್ನು ಜೋಡಿಸುವ ಎಡೆಬಿಡೆಯಿಲ್ಲದ ಕೆಲಸ. ಅಕ್ಕನಿಗಂತು ತನ್ನ ಜರತಾರಿ ಲಂಗಗಳನ್ನು ಒಣಗಿಸುವದು ಹೇಗೆ ಎಂಬ ಚಿಂತೆ ಕಾಡತೊಡುತ್ತದೆ.

 “ ಓ ಮಳೆಯೇ, ನನಗೊಂದು ಆಸೆ ಈಡೇರಿಸುವೆಯಾ...? ನಾನು ಏಕಾಂತದಲ್ಲಿರುವಾಗ ಸುರಿ. ನನ್ನವಳಿಲ್ಲದೆ ಬೇಜಾರಾಗಿ ಕುಳಿತ ಸಮಯದಲ್ಲಿ. ಮತ್ತೆ ನಿನ್ನೊಂದಿಗೆ ಆಟವಾಡುವ ಆಸೆಯಾಗಿದೆ. ಎಷ್ಟೆಂದರೆ ನಾನು ಮನೆ, ಪೋಲಿ ಗೆಳೆಯರ ಬಳಗ, ಕಾಡಿಸುವ ಅಕ್ಕ, ಜಗಳಗಂಟ ತಮ್ಮ, ಜಾತಿಗೀತಿ, ಕೆಲಸದ ಒತ್ತಡ, ದುಡ್ಡು, ಸ್ವಾರ್ಥ ಎಲ್ಲವನ್ನು ಬಿಟ್ಟು ಅಷ್ಟೇ ಅಲ್ಲ ಹೃದಯವನ್ನು ಚೂಟಿ ಮರೆಯಾಗುವ ಗೆಳತಿಯನ್ನು ಮರೆತು ನಿನ್ನೊಂದಿಗೆ, ಕೇವಲ ನಿನ್ನೊಂದಿಗೆ ಬರೀ ಮೈಯಲ್ಲಿ ಲೋಕದ ಯಾವ ಭವಬಂಧನಗಳ ಹಂಗಿಲ್ಲದೆ ಆಟವಾಡಬೇಕಾಗಿದೆ”
ಬಾ ಮಳೆಯೆ ಬಾ....
ಲೇಖನ : ಸಂಗಮೇಶ ಡಿಗ್ಗಿ ಸಂಗಾಮಿತ್ರ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..?

ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿಳಿಸಿತು. ಮನೆಯ ಹೊರಗೆ ಕಾಲಿಡದಂತಹ ರೌರವ ನರಕದ ವಾಸನೆ ಮೂಗಿಗೆ ಬಡಿಯುತಿತ್ತು. ಮೂರು ದಿನಗಳ ಕಾಲ ವಿಧಿಸಿದ ಕರ್ಫ್ಯೂ ಹೊಸವರ್ಷದ ಸಂತಸವನ್ನು ಕಿತ್ತುಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಶಾಂತಿ ಸೌರ್ಹಾದದ ನಗರ ಈ ದುಷ್ಕೃತ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ತಹಶೀಲ್ದಾರ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಪ್ರತಿಯೊಬ್ಬರಲ್ಲೂ ಭಯ ಮನೆಮಾಡಿತು. ನೋಡ ನೋಡುತ್ತಿದ್ದಂತೆ ಬಸ್ನ ಗಾಜುಗಳು ಪುಡಿಯಾದವು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಹಿಂದೆಂದೂ ಕಾಣದ ಪೊಲೀಸ್ ಬೂಟಿನ ಸಪ್ಪಳ ಗಲ್ಲಿಗಲ್ಲಿಗಳಲ್ಲ್ಲಿ ಮಾರ್ದನಿಸತೊಡಗಿತು.
ಎಲ್ಲರಲ್ಲೂ ಒಂದೇ ಕೂಗು. ಧ್ವಜ ಹಾರಿಸಿದವರನ್ನು ಬಂಧಿಸಬೇಕು. ಧ್ವಜ ಹಾರಿಸಿದವರು ಮುಸ್ಲಿಮ್ ಸಮುದಾಯದವರು, ಅವರನ್ನು ತಕ್ಷಣ ವಿಚಾರಿಸಿ ಬಂಧಿಸಬೇಕು. ಎಲ್ಲೆಡೆಯೂ ಕೇಸರಿಯ ಶಾಲು, ಹಣೆಯಲ್ಲಿ ಸಿಂಧೂರ ಇಟ್ಟುಕೊಂಡವರು ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಇನ್ನೂ ಬಲಿಯದ ಮುಖಂಡರು. ಇತ್ತ ಮುಸ್ಲಿಮ್ ಬಾಂಧವರಲ್ಲಿ ತಲ್ಲಣದ ಜೊತೆ ಅಭದ್ರತೆಯ ಭಾವ ಮೂಡಿತು.
ಇಡೀ ನಗರವೆಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡತೊಡಗಿತು. ಆದರೆ ಧ್ವಜ ಹಾರಿಸಿದವ…

ಸಂಬಂಧ ಬೇರೂರುವ ಮುನ್ನ

ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ.
ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ.
ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ.
ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿಶಾಲವಾಗಿ…

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ
ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ

ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ
ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ

ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ
ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ

ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ
ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ

ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ
ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ

ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ
ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ


-    ಸಂಗಮೇಶ ಡಿಗ್ಗಿ
8553550012