ವಿಷಯಕ್ಕೆ ಹೋಗಿ

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ.
ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ.
ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ.
ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..?
ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ ಕಾಣದ ಹಡಗಿನಂತಾಗುತ್ತದೆ ಬಾಳು. ತಮ್ಮ ಜೀವನವೇ ಗಟ್ಟಿಮಾಡಿಕೊಳ್ಳಲಾರದೇ ಪರಿತಪಿಸುವವು ನಮಗೆ ಪುಗ್ಸಟ್ಟೆ ಐಡಿಯಾ ಕೊಡುತ್ತಾ ನಮ್ಮ ಬಾಳನ್ನು ಕತ್ತಲಲ್ಲಿ ನೂಕಲು ನಿಂತಿರುತ್ತಾರೆ.
ಅಪ್ಪಅವ್ವ ಕಂಡ ಕನಸುಗಳನ್ನು ನನಸು ಮಾಡುವನು ನಾನೇ ಅಲ್ಲವೇ? ನನಗೆ ನನದೇ ಆದ ಗುರಿಯಿದೆ, ದಾರಿವಿದೆ, ಬಣ್ಣಬಣ್ಣದ ಕನಸುಗಳಿವೆ. ಅದು ಇತರರಿಗೆ ಯಾಕೆ ಅರ್ಥವಾಗುತ್ತಿಲ್ಲ?
ಇವರ ಜಾತ್ರೆಯ ನಡುವೆ ಪಾರಾಗಿ ಒಂಟಿಯಾಗಬೇಕು. ಒಂಟಿತನದಲ್ಲಿ ಏನೋ ಒಂಥರಾ ಸುಖವಿದೆ. ಒಂಟಿತನದಲ್ಲಿ ಹರಿಸಿದ ಕಣ್ಣಿರು ಭವಿಷ್ಯದಲ್ಲಿ ಮುತ್ತಿನ ಹನಿಗಳಾಗಿ ಮಾರ್ಪಾಡಾಗುತ್ತವೆ ಎಂದು ಎಲ್ಲೋ ಓದಿದ ನೆನಪು. ನಾನು ಅಳುವಾಗ ಮತ್ತೋಬ್ಬರ ಸಮಾಧಾನ ಅಲ್ಪ ಮಟ್ಟಿಗೆ ಸಮಾಧಾನ ನೀಡುತ್ತದೆ. ಅದೇ ಏಕಾಂಗಿಯಾಗಿ ಟೈವಾಕ್ ಗುಡ್ಡದ ಕೆಂಪುದಾರಿಯ ಮೇಲೆ ಕಣ್ಣೀರ ಹನಿಗಳನ್ನು ಸುರಿಸುತ್ತಾ, ದೂರದಲ್ಲಿ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಸಾಗುವಾಗ ಏನೋ ಖುಷಿಯಾಗುತ್ತದೆ. ನನಗೆ ಎಲ್ಲಾ ಸಂಬಂಧಗಳು ಚಿಂದಿಯಾಗಿ ಹರಿದು ಹೋದರು ನಿಸ್ವಾರ್ಥಿ ಹಾಲುಗಲ್ಲದ ಚಂದಿರ ನನ್ನ ಜೋತೆ ಇರುತ್ತಾನೆ. ಅಷ್ಟು ಸಾಕಲ್ಲವೇ ನನಗೆ ನನ್ನ ನೋವನ್ನು ಅರ್ಥಮಾಡಿಕೊಂಡು ಹಿತವಾದ ತಂಗಾಳಿ ಬೀಸುತ್ತಾ ನಾ ನಡಯುವ ದಾರಿಯಲ್ಲಿ ಮಂದ ಬೆಳಕು ಚಲ್ಲಲ್ಲು.
ಏಕಾಂಗಿಯಾಗಿ ಸಾಗುವಾಗ ಸುಡುವ ಬಿಸಿಲು ಸಹ ಇಷ್ಟವಾಗುತ್ತದೆ. ರೂಮಿನ ಗೋಡೆಗಳು ಸಹ ಆಪ್ತವೆನಿಸುತ್ತವೆ. ಜೋರಾಗಿ ಅಳುವಾಗ ರಮಿಸದೆ ನನ್ನ ಪಾಡಿಗೆ ಬಿಟ್ಟು ನನಗೆ ಉಪದೇಶ ಮಾಡುವದಿಲ್ಲ. ಗೋಡೆಗಳ ಮೇಲೆ ನಾನೇ ಗೀಚಿದ ಸಾಲುಗಳು ಕೂಡಾ ಕೆಲವೊಮ್ಮೆ ಉಪದೇಶ ನೀಡುವಂತೆ ಭಾಸವಾದಾಗ ಅಳಿಸಿ ಬಿಡುತ್ತೇನೆ. ನನಗೆ ಯಾರೂ ಮಾತನಾಡಿಸಬಾರದು ಯಾವ ಸಂಭಂಧಗಳು ಇರಬಾರದು ಒಬ್ಬನೇ ಅಡ್ಡಾಟಬೇಕು ಗೋತ್ತು ಗುರಿಯಿಲ್ಲದೇ ಅನ್ನುವ ಸತ್ಯವು ಮನದಲ್ಲಿ ಗಟ್ಟಿಯಾಗಿ ಮೂಡುವಷ್ಟರಲ್ಲಿ ಮನೆಯಿಂದ ಕರೆ ಬಂದು ಮತ್ತೆ ಅದೇ ಗಜಿಬಿಜಿ ಸಂತೆಯೊಳಗೆ ನಾನು ಒಬ್ಬ ಅನ್ನೋ ಹರಿತವಾದ ಸತ್ಯ ಎದೆಯಲ್ಲಿ ಬರ್ಬರವಾಗಿ ಗಾಯಮಾಡಿದ ಅನುಭವವಾಗುತ್ತದೆ.
ಲೇಖನ :ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..?

ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿಳಿಸಿತು. ಮನೆಯ ಹೊರಗೆ ಕಾಲಿಡದಂತಹ ರೌರವ ನರಕದ ವಾಸನೆ ಮೂಗಿಗೆ ಬಡಿಯುತಿತ್ತು. ಮೂರು ದಿನಗಳ ಕಾಲ ವಿಧಿಸಿದ ಕರ್ಫ್ಯೂ ಹೊಸವರ್ಷದ ಸಂತಸವನ್ನು ಕಿತ್ತುಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಶಾಂತಿ ಸೌರ್ಹಾದದ ನಗರ ಈ ದುಷ್ಕೃತ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ತಹಶೀಲ್ದಾರ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಪ್ರತಿಯೊಬ್ಬರಲ್ಲೂ ಭಯ ಮನೆಮಾಡಿತು. ನೋಡ ನೋಡುತ್ತಿದ್ದಂತೆ ಬಸ್ನ ಗಾಜುಗಳು ಪುಡಿಯಾದವು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಹಿಂದೆಂದೂ ಕಾಣದ ಪೊಲೀಸ್ ಬೂಟಿನ ಸಪ್ಪಳ ಗಲ್ಲಿಗಲ್ಲಿಗಳಲ್ಲ್ಲಿ ಮಾರ್ದನಿಸತೊಡಗಿತು.
ಎಲ್ಲರಲ್ಲೂ ಒಂದೇ ಕೂಗು. ಧ್ವಜ ಹಾರಿಸಿದವರನ್ನು ಬಂಧಿಸಬೇಕು. ಧ್ವಜ ಹಾರಿಸಿದವರು ಮುಸ್ಲಿಮ್ ಸಮುದಾಯದವರು, ಅವರನ್ನು ತಕ್ಷಣ ವಿಚಾರಿಸಿ ಬಂಧಿಸಬೇಕು. ಎಲ್ಲೆಡೆಯೂ ಕೇಸರಿಯ ಶಾಲು, ಹಣೆಯಲ್ಲಿ ಸಿಂಧೂರ ಇಟ್ಟುಕೊಂಡವರು ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಇನ್ನೂ ಬಲಿಯದ ಮುಖಂಡರು. ಇತ್ತ ಮುಸ್ಲಿಮ್ ಬಾಂಧವರಲ್ಲಿ ತಲ್ಲಣದ ಜೊತೆ ಅಭದ್ರತೆಯ ಭಾವ ಮೂಡಿತು.
ಇಡೀ ನಗರವೆಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡತೊಡಗಿತು. ಆದರೆ ಧ್ವಜ ಹಾರಿಸಿದವ…

ಸಂಬಂಧ ಬೇರೂರುವ ಮುನ್ನ

ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ.
ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ.
ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ.
ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿಶಾಲವಾಗಿ…

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ
ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ

ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ
ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ

ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ
ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ

ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ
ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ

ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ
ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ

ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ
ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ


-    ಸಂಗಮೇಶ ಡಿಗ್ಗಿ
8553550012