ವಿಷಯಕ್ಕೆ ಹೋಗಿ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ.
ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..?
ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ ಅಲ್ವಾ...! ಎಂಬುದು ನನ್ನಂತ ಅಮಾಯಕರ ಪ್ರಶ್ನೆಯಾಗಿದೆ.
ನಾನು ಹತ್ತನೇ ತರಗತಿ ಓದುವಾಗ ನಮ್ಮಪ್ಪ ಮುಂಜಾನೆ ಓದಿದರೆ ತಲೆಗೆ ಹತ್ತುತ್ತೆ ಅಂತ ತಲೆ ತಿನ್ನುತ್ತಿದ್ದ. ಸೂರ್ಯ ನೆತ್ತಿಯ ಮೇಲೆ ಬಂದು ಛೀತೂ ಅಂತಾ ಉಗುಳಿ ಕಾಲಾಗಿನ ಕೆರ ತೊಗೊಂಡು ಹೊಡೆದರೂ ಏಳದ ನಾನು ಅಪ್ಪನ ಬೆತ್ತದ ಏಟಿನಿಂದ ಏಳುವದು ಮಾಮೂಲಿಯಾಗಿತ್ತು. ಅವತ್ತೆ ಬೇಗ ಎದ್ದು ನಮ್ಮಪ್ಪ ವಿರುದ್ದ ಸೇಡು ತಿರಿಸಿಕೊಳ್ಳಬೇಕು ಎಂದು ‘ಅಲರಾಂ’ ಗಡಿಯಾರ ಕೊಂಡೆ.
ಬೆಳಗ್ಗೆ 5 ಗಂಟೆಗೆ ಅಲರಾಂ ಇಟ್ಟು ಮಲಗಿದಾಗ ಸುಖ ನಿದ್ದೆ ಆವರಿಸಿ ಕನಸಲ್ಲಿ ಚಂದ್ರನ ಅಂಗಳದಲ್ಲಿ ನಮ್ಮುಡುಗಿ ಜೊತೆ ಮೊಲದ ಜೊತೆ ಆಟವಾಡುತ್ತಾ ಇದ್ದೆ. ಇತ್ತ ಕಡೆ ಅಲರಾಂ ಬಾರಿಸುತ್ತಿದ್ದರು ಅದರ ತಲೆಗೆ ಟಕ್ ಅಂತ ಕುಟ್ಟಿ ಅದರ ಬಾಯಿ ಮುಚ್ಚಿ ಮತ್ತೆ ನಮ್ಮುಡುಗಿ ಜೊತೆ ಆಟವಾಡಲು ಪೂರ್ವಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಮತ್ತೆ ಅಲರಾಂ ಗಂಟೆ ಸದ್ದು. ಮತ್ತೆ ನೆತ್ತಿಯ ಮೇಲೆ ಹೊಡೆತ. ಚಳಿಗೆ ಮೈ ನಡುಗಿ ಚಳಿಯಾದಾಗ ಬಾಜು ಮಲಗಿದ್ದ ಅಪ್ಪನ ಕೌದಿಯನ್ನು ಎಳೆದು ರಾಜಾರೋಷವಾಗಿ ಮಲಗಿದೆ. ಎದ್ದಾಗ 10 ಗಂಟೆ. ಅವತ್ತು ಮನೆಯಲ್ಲಿ ಅಪ್ಪನ “ಬೈಗುಳಗಳ ಅಲರಾಂ” ರಣಕಹಳೆಯಂತೆ ಮೊಳಗುತಿತ್ತು. ನೀನು ಈ ಭೂಮಿಯ ಮೇಲೆ ಬದುಕಿರುವದು ನಾಲಾಯಕ್ಕೂ, ಸುನ್ನು ಅಕ್ಕನ ನೋಡಿಯಾದರೂ ಕಲಿ, ದಂಡಪಿಂಡ ವಂಶದವನೆ ರಾತ್ರಿ ಲೇಟಾಗಿ ಮಲಗಲು ಅದೇನು ಘನಂದಾರಿ ಕೆಲಸ ಮಾಡ್ತಿ..? ಇತ್ಯಾದಿ ಬಿರುದಾವಳಿಗಳ ಅಭಿಷೇಕ ಎಡೆಬಿಡೆಯಿಲ್ಲದೆ ನಡೆಯುತಿತ್ತು. ಅದನ್ನು ನೋಡಿ ಅಕ್ಕ ಮುಸಿಮುಸಿ ನಗುತ್ತಾ ಹೀಯಾಳಿಸುತಿದ್ದಳು. ಅಪ್ಪ ಹೊಡೆದಾಗ ಸಿಟ್ಟು ಬರುವದಕ್ಕಿಂತ ಅಕ್ಕ ನನ್ನನ್ನು ಗೇಲಿ ಮಾಡುವಾಗ ಎರಡುಪಟ್ಟು ಸಿಟ್ಟು ಬಂದು ಆಕೆಯನ್ನು ಹೊಡೆಯಬೇಕು ಎನಿಸುತಿತ್ತು. ಅವ್ವ ಮಾತ್ರ ‘ನೀನು ನನ್ನ ಬಂಗಾರಕಂದ ಅಲ್ವಾ ಬೇಗ ಏಳುವ ಅಭ್ಯಾಸ ಮಾಡಬೇಕು’ ಎಂದು ಮುದ್ದು ಮಾಡುತ್ತಿದ್ದಳು. ಸಾಲದೆಂಬಂತೆ ಬಿಸಿಬಿಸಿ ಹಾಲು, ಬ್ರೆಡ್ಡಿನ ಚೂರು ಕೊಡುತ್ತಿದ್ದಳು.
ಪಕ್ಕದ ಮನೆಯ ಪಾತರಗಿತ್ತಿ ಚಿತ್ರವಿರುವ ಕೆಂಪುಲಂಗಾ ತೊಡುವ ಪೋರಿ ಮುಂಜಾನೆ ಬೇಗ ಎದ್ದು ಓದಿ ನಮ್ಮ ಊರಿಗೆ ಮೊದಲನೇ ಸ್ಥಾನದಲ್ಲಿ ಪಾಸಾಗಿದ್ದಳು. ಅದಕ್ಕೆ ಅವರಪ್ಪ ಊರತುಂಬ ಹೇಳಿ ತಿರುಗಿದ್ದೆ ತಿರುಗಿದ್ದು ‘ನನ್ನ ಮಗಳನ್ನು ನೋಡಿ ಕಲೀರಿ’ ಅಂತ. ಬಡ್ಡಿಮಗ ಅವನಿಗೇನು ಗೊತ್ತು ನಮ್ ಗಂಡ್‍ಹೈಕಳು ಅವಳನ್ನು ನೋಡಿಯೇ ಬರ್ಬಾದ ಆಗಿದ್ದಾರೆ ಅಂತ. ಇಂತವುಗಳೆಲ್ಲವೂ ಸೂರ್ಯಪುತ್ರರು ದಿನಾಲು ಅನುಭವಿಸುವ ಮಾನಸಿಕ ಕಿರಿಕಿರಿಯಾಗಿದೆ. ಅವರಿಗೆ ಯಾರು ಬಿಡಿಗಾಸು ಮರ್ಯಾದೆ ಕೊಡುತ್ತಿಲ್ಲ.
ಅದಕ್ಕಾಗಿಯೇ ನಾನು ಬೇಗ ಏಳುವವರಿಗಾಗಿಯೇ ಕೆಲವು ಸಲಹೆಗಳನ್ನು ಕಂಡುಹಿಡಿದಿದ್ದೆನೆ. ಅವು ಈ ಕೆಳಗಿನಂತಿವೆ.
    ಆದಷ್ಟೂ ಮಂದಿರ/ ಮಸೀದ್ ಪಕ್ಕದಲ್ಲಿ ವಾಸಮಾಡಿ. ಅವರು ಬೆಳ್ಳಂಬೆಳಗ್ಗೆ ಮೈಕ್‍ನಲ್ಲಿ ಮೊಳಗುವ ಪ್ರಾರ್ಥನೆಯಿಂದ ಎಚ್ಚರವಾಗುತ್ತಿರಿ.
    ಕೆಟ್ಟ ಸಂಗಾತಿಯನ್ನು  ಮಧುವೆಯಾಗಿ ಅವಳು ಕೊಡುವ ತಾಪತ್ರಯದಿಂದ ಶಾಂತಿ ನೆಮ್ಮದಿ ಎಲ್ಲಾ ಕಾಣೆಯಾಗಿ ನೀವು ಜೀವನಪರ್ಯಂತ 24*7 ಎಚ್ಚರದಿಂದ ಇರುತ್ತಿರಿ.
    ರೂಮಲ್ಲಿ ತಿಗಣೆ, ಜಿರಳೆ ಹಲ್ಲಿಯನ್ನು ಸಾಕಿ. ಅವುಗಳು ನಿಮಗೆ ನಿದ್ದೆಯನ್ನು ಬರಲು ಅನುವು ಮಾಡಿಕೊಡದೆ ನೀವು ಎಚ್ಚರಿದಿಂದ ಇರುತ್ತಿರಿ.
    ನಿಮ್ ಹುಡುಗಿಗೆ ಬೆಳಗ್ಗೆ ಕಾಲ್ ಮಾಡಲು ಹೇಳಿ ಅವಾಗ ನೀವು ಖಂಡಿತವಾಗಿ ಎಚ್ಚರವಾಗುತ್ತಿರಿ.
    ಹೊಸ ರುಚಿ ಟ್ರೈಮಾಡಿ ರಾತ್ರಿ ಒಗ್ಗರಣೆಗೆ ಹರಳೆಣ್ಣೆ ಹಾಕಿ ತಿನ್ನಿ, ಬೆಳ್ಳಂಬೆಳಗ್ಗೆ ಚೊಂಬು ಹಿಡಿಯುವ ಕಾರ್ಯ ಒದಗಿ ಬರುವದರಿಂದ ನೀವು ಖಂಡಿತವಾಗಿ ಬೇಗ ಎದ್ದೆಳುತ್ತಿರಿ.
    ಮಲಗೊ ಮುಂಚೆ ನ್ಯೂಸ್‍ಪೇಪರ್ ಓದಲು ಹೋಗಬೇಡಿ. ಅದರಲ್ಲಿ ನಿದ್ದೆಯಮಗ, ಮಣ್ಣಿನ ಮಗ ಅಂತ ವಿಧಾನಸೌಧದಲ್ಲಿ ಮಲಗಿರುವ ನಾಯಕರ ಪೋಟೊ ಇರುತ್ತದೆ. ಅದನ್ನು ನೋಡಿದ ನಿಮಗೆ ನಿದ್ದೆ ಆವರಿಸಿ ಬೆಳಗ್ಗೆ ಏಳಲು ತೊಂದರೆಯಾಗುತ್ತದೆ..!
    ಇನ್ನು ಸುಲಭವಾದ ಉಪಾಯ ಎಂದರೆ ರಾತ್ರಿ ಮಲಗದೇ ಇರುವುದು..!
ಅದಕ್ಕೂ ಆಗಲಿಲ್ಲ ಎಂದರೆ ನನಗೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ಕೊಡಿ ನಿಮ್ಮನ್ನು ನಾನು ಖಂಡಿತಾ ಎಬ್ಬಿಸುತ್ತೇನೆ. ಆದರೆ ಅದಕ್ಕಿಂತ ಮೊದಲು ನೀವು ನನ್ನನ್ನು ಎಬ್ಬಿಸಬೇಕು ಅಷ್ಟೇ...!!!!
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸಂಬಂಧ ಬೇರೂರುವ ಮುನ್ನ

ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ. ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ. ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ. ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿ