ವಿಷಯಕ್ಕೆ ಹೋಗಿ

ಎಚ್ಚರವಿರುವುದು ಕನಸುಗಳು ಮಾತ್ರ


ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು.
ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ.
ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡಿಯಂತೆ ಕಾಣುವ ಕೋಣೆಯೊಳಗಗಡೆ ಧನಲಕ್ಷೀ ಕಿಲಕಿಲನೆ ನಗುತ್ತಾ ಡ್ರಾಯರಿನ ಒಳಗೆ ಬಂಧಿಯಾಗಿರುತ್ತಾಳೆ. ಹೆಗಲ ಮೇಲಿನ ಟವಲ್‍ನಿಂದ ಕೈ ಒರೆಸಿಕೊಂಡು ಚಕಚಕನೆ ನೋಟುಗಳನ್ನು ಎಣಿಸುತ್ತಾ ಲಾಭ-ನಷ್ಟ ತಿಳಿಯಲು ಕ್ಯಾಲ್ಕುಲೇಟರ್ ಬಟನ್‍ಗಳಿಗೆ ಕಚಗುಳಿ ಇಡಲು ತೋರುಬೆರಳು ಸಂತೋಷದಿಂದ ಕುಣಿಯುತ್ತದೆ. ಜಾತಿಕುಲವೆನ್ನದೆ ಊರೂರು ಅಡ್ಯಾಡಿ ಬಂದ, ಮಾಸಿಹೋದ ಅಕ್ಷರಗಳನ್ನು ನೆಪಮಾತ್ರಕ್ಕೆ ಹೊಂದಿರುವ ಐದು ರೂಪಾಯಿಯ ನೋಟು ಶೀಲ ಕಳೆದುಕೊಂಡ ಹೆಣ್ಣಿನಂತೆ ಡ್ರಾಯರಿನ ಮೂಲೆಯಲ್ಲಿ ಅಡಗಿ ಕಣ್ಣೀರು ಸುರಿಸುತ್ತಿರುತ್ತದೆ.
ಡ್ರೆಸಿಂಗ್ ರೂಂನಲ್ಲಿ ಎಳೆದಿರುವ ಹಗ್ಗಕ್ಕೆ ಕುಣಿದು ಸುಸ್ತಾದ ಬಟ್ಟೆಗಳು ಜೋತುಬಿದ್ದಿರುತ್ತವೆ ಬಾವಲಿಯ ಹಾಗೆ. ವೇಷ ತೊಡುವಾಗಿನ ತಾಳ್ಮೆ ಆತ್ಮಹತ್ಯೆ ಮಾಡಿಕೊಂಡು ಧಾವಂತದಲ್ಲಿ ಭಾರ ಕಳೆದುಕೊಳ್ಳುವಂತೆ ಬಟ್ಟೆ ಬಿಚ್ಚುತ್ತಿರುತ್ತಾರೆ. ‘ದೇಹವು ಮೂಳೆ ಮೌಂಸದ ತಡಿಕೆ’ ಎನ್ನುವ ಹಾಡು ಕಂಬಕ್ಕೆ ಬಿಗಿಯಾಗಿ ಕಟ್ಟಿದ ಮೈಕ್‍ನಿಂದ ಉದುರಿ ಬರುತ್ತದೆ. ಪಾತ್ರಧಾರಿಣಿಯ ‘ಕುಲುಕಾಟ’ಕ್ಕೆ ಮನಸೋತ ರಸಿಕ ಮಹಾಶಯ ಐದು ಬೆರಳ ಉಂಗುರು ತೋರಿಸು, ಹಲ್ಲು ಕಿರಿಯುತ್ತಾ ಶೃಂಗಾರ ಭಾವದ ಮುಖಹೊತ್ತು ‘ವ್ಯಾಪಾರ’ದ ಬಗ್ಗೆ ಮಾತಾಡಲು ತುದಿಗಾಲ ಮೇಲೆ ನಿಂತಿರುತ್ತಾನೆ. ಮನೆಗೆ ಬನ್ನಿ ಎಂದು ಊಟದ ಅಹ್ವಾನ ನಿಡುತ್ತಾನೆ ನೆಪಕ್ಕಾಗಿ.
ಜಗಮಗಿಸೋ ಬಟ್ಟೆಗಳನ್ನು ಹಾಕಿಕೊಂಡ ಪಾತ್ರಧಾರಿಗಳು ಕ್ಷಣಮಾತ್ರದಲ್ಲಿಯೇ ಶತಮಾನಗಳಷ್ಟು ಹಿಂದೆ ತೊಳೆದ ಟವಲ್ ಸುತ್ತುಕೊಂಡು ಮುಖ ತೊಳೆಯಲು ನುಗ್ಗಿ ಬೆಂಡಾದ ಡ್ರಂನ ಒಳಗೆ ಬೆಂಡಾದ ಚೊಂಬನ್ನು ಹುಡುಕುತ್ತಾರೆ. ಹೊಳೆಯುವ ಬೆಳಕಿನಲ್ಲಿ ಮೆತ್ತಿಕೊಂಡ ಮೇಕಪ್ ಕತ್ತಲ ಬಚ್ಚಲು ಸಂಧಿಯಲ್ಲಿ ಕಳಚಿ ಹೋಗುತ್ತದೆ ಮೋರಿ ನೀರಿನೊಳಗೆ ಸೇರಿಕೋಳ್ಳಲು.
ಹೊಟ್ಟಯಲ್ಲಿ ಹಸಿವು ಸಣ್ಣಗೆ ನಾಟಕ ಆರಂಭಿಸಿರುತ್ತದೆ. ಎಲ್ಲಿಯೋ ಇದ್ದ ಅನಾಮಧೇಯ ಪಾತ್ರಧಾರಿಗಳು ಬಂದು ಸೇರುವಷ್ಟರಲ್ಲಿ ಸ್ಟೋ ಮೇಲೆ ಇದ್ದ ಅನ್ನ ಅಚ್ಚ ಬಿಳಿಮಲ್ಲಿಗೆಯಂತೆ ಅಹ್ವಾನ ನೀಡುತ್ತದೆ. ಅದರ ಜೊತೆಗೆ ಸಾಂಬರ್ ಇಲ್ಲದೇ ಹೋದರೆ ಉಪ್ಪಿನಕಾಯಿ ಆದರೂ ಆದಿತೂ! ಅಲ್ಲಿ ಚಂದದ ದೃಶ್ಯ ಮೈಕೊಡವಿಕೊಂಡಿರುತ್ತದೆ. ಸಹಭೋಜನ ಮಾಡುತ್ತಾ ಅವರಿವರೂ ವೇಧಿಕೆಯಲ್ಲಿ ಮಾಡಿದ ತಪ್ಪನ್ನು ಅನುಕರಣೆ ಮಾಡುತ್ತಾ, ಕಾಲೆಳೆಯುತ್ತಾ, ಕಲೆಕ್ಷನ್ ನಷ್ಟದ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಯುದ್ಧಗೆದ್ದ ಅಲೆಕ್ಸ್‍ಗಾಂಡರ್ ತರ ಜಗದ ಒಡೆಯೆರೆಂಬಂತೆ ಸಂತೋಷ ಉಕ್ಕಿಸುತ್ತಿರುತ್ತಾರೆ. ಅಷ್ಟರಲ್ಲಿ ಅಯ್ಯೋ ಹಾಲು ಉಕ್ಕುತ್ತಿದೆ ಎಂದು ಪುಟ್ಟ ಒಲೆಯಲ್ಲಿ ಇಟ್ಟ ಹಾಲಿನ ಪಾತ್ರೆಯ ಕಡೆ ಧಾವಿಸುತ್ತಾಳೆ ನಟಿಮಣಿ. ಪುಟ್ಟ ಮಗು ಜಾತ್ರೆಯ ಕರಿಬಿಳಿ ಬೆಂಡುಬತ್ತಾಸನಂತಿರುವ ಹಾರ್ಮೋನಿಯಂ ಮೇಲೆ ಕೈಯಾಡಿಸುತ್ತಿರುತ್ತದೆ.
ಊಟವಾದ ಮೇಲೆ ಕೆಂಪಡಿಕೆಗೆ ಸುಣ್ಣ ಸೇರಿಸಿ ಅರಗಿ ತಿನ್ನಲು ಹಸಿರೆಲೆ ಪ್ಲಾಸ್ಟಿಕ್ ಕವರ್‍ನಿಂದ ಹೊರಬಂದು ದವಡೆಗಳಲ್ಲಿ ಸಣ್ಣಗಾಗುತ್ತದೆ. ಮತ್ತೊಬ್ಬ ಹಚ್ಚಿದ ಆರಿದ ಅರ್ಧ ಬಿಡಿಗೆ ಬೆಂಕಿ ಹಚ್ಚಲು ಬನಿಯನ್‍ನ ಜೇಬಿನೊಳಗೆ ಬಲಗೈ ಸೇರಿಸುತ್ತಾನೆ. ಸ್ಟಾರ್,ವಿಮಲ್,, ಗಾಯಚಾಪ ಹೆಸರಿರುವ ಬ್ರಾಂಡೆಡ್ ಗುಟುಕಾ ಚೀಟಿಗಳು ಒಬ್ಬರಿಂದ ಒಬ್ಬರಿಗೆ ವಿನಿಮಯವಾಗುತ್ತವೆ. ದುಶ್ಚಟವೆಂದೂ ದೂರವಿರುವ ಇನ್ನೊಬ್ಬ ಮೈಲುದೂರದಲ್ಲಿರುವ ಗೆಳತಿಯನ್ನು ನೆನಸಿಕೊಳ್ಳುತ್ತಾ ಪೋಸ್ಟರ್ ಮೇಲಿರುವ ಚಲುವೆಯ  ಮುಖನೋಡುತ್ತಾ ಮೈಮರೆತಿರುತ್ತಾನೆ.
ಕತ್ತಲನ್ನು ಸೀಳಿಬರುವ ರಾತ್ರಿಯಲ್ಲಿ ಇಡೀ ಊರಿಗೆ ಊರೇ ಮಲಗಿ ಗಾಡನಿದ್ರೆಯಲ್ಲಿದ್ದಾಗ ಎಚ್ಚರವಾಗಿದ್ದು ಬೀದಿದೀಪಗಳು ಮತ್ತು ಇವರ ಕನಸುಗಳು ಮಾತ್ರ.
-    ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

#ಬನಾಯೇಂಗೆ_ಮಂದಿರ್: ಅದಕ್ಕೂ ಮುನ್ನ ಕಟ್ಟಬೇಕಾದದ್ದು ಏನು..?

ಅದು ಹೊಸವರ್ಷದ ದಿನ. ಅಂದು ಬೆಳಗ್ಗೆ ಎಲ್ಲರಲ್ಲೂ ಸಂತಸದ ಛಾಯೆ ಮೂಡಿ, ಪರಸ್ಪರ ಶುಭಾಶಯ ಕೋರಿ ನಗುವನ್ನು ಹಂಚಬೇಕಾಗಿತ್ತು. ಆದರೆ, ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನು ಬೆಚ್ಚಿ ಬಿಳಿಸಿತು. ಮನೆಯ ಹೊರಗೆ ಕಾಲಿಡದಂತಹ ರೌರವ ನರಕದ ವಾಸನೆ ಮೂಗಿಗೆ ಬಡಿಯುತಿತ್ತು. ಮೂರು ದಿನಗಳ ಕಾಲ ವಿಧಿಸಿದ ಕರ್ಫ್ಯೂ ಹೊಸವರ್ಷದ ಸಂತಸವನ್ನು ಕಿತ್ತುಕೊಳ್ಳುವುದರ ಜೊತೆಗೆ ಮನಸ್ಸಿಗೆ ಆಘಾತವನ್ನುಂಟು ಮಾಡಿತ್ತು. ಶಾಂತಿ ಸೌರ್ಹಾದದ ನಗರ ಈ ದುಷ್ಕೃತ್ಯಕ್ಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಯಿತು.
ತಹಶೀಲ್ದಾರ ಕಚೇರಿ ಆವರಣದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಪ್ರತಿಯೊಬ್ಬರಲ್ಲೂ ಭಯ ಮನೆಮಾಡಿತು. ನೋಡ ನೋಡುತ್ತಿದ್ದಂತೆ ಬಸ್ನ ಗಾಜುಗಳು ಪುಡಿಯಾದವು. ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಹಿಂದೆಂದೂ ಕಾಣದ ಪೊಲೀಸ್ ಬೂಟಿನ ಸಪ್ಪಳ ಗಲ್ಲಿಗಲ್ಲಿಗಳಲ್ಲ್ಲಿ ಮಾರ್ದನಿಸತೊಡಗಿತು.
ಎಲ್ಲರಲ್ಲೂ ಒಂದೇ ಕೂಗು. ಧ್ವಜ ಹಾರಿಸಿದವರನ್ನು ಬಂಧಿಸಬೇಕು. ಧ್ವಜ ಹಾರಿಸಿದವರು ಮುಸ್ಲಿಮ್ ಸಮುದಾಯದವರು, ಅವರನ್ನು ತಕ್ಷಣ ವಿಚಾರಿಸಿ ಬಂಧಿಸಬೇಕು. ಎಲ್ಲೆಡೆಯೂ ಕೇಸರಿಯ ಶಾಲು, ಹಣೆಯಲ್ಲಿ ಸಿಂಧೂರ ಇಟ್ಟುಕೊಂಡವರು ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಇನ್ನೂ ಬಲಿಯದ ಮುಖಂಡರು. ಇತ್ತ ಮುಸ್ಲಿಮ್ ಬಾಂಧವರಲ್ಲಿ ತಲ್ಲಣದ ಜೊತೆ ಅಭದ್ರತೆಯ ಭಾವ ಮೂಡಿತು.
ಇಡೀ ನಗರವೆಲ್ಲಾ ಮುಸ್ಲಿಮರನ್ನು ಅನುಮಾನದಿಂದ ನೋಡತೊಡಗಿತು. ಆದರೆ ಧ್ವಜ ಹಾರಿಸಿದವ…

ಸಂಬಂಧ ಬೇರೂರುವ ಮುನ್ನ

ಒಂದೇ ಗರ್ಭದಲ್ಲಿ ಮೊಳಕೆಯೊಡೆದವರಲ್ಲ, ಕೂಡಿಬೆಳೆದವರಲ್ಲ, ಒಬ್ಬರಿಗೊಬ್ಬರು ಪರಿಚಯವಿಲ್ಲ. ಆದರೆ ಕಾಣದೆ ಇರುವ ವಿಧಿಯ ಹೆಸರಿನಲ್ಲಿ ಪರಸ್ಪರ ಸಂಧಿಸುವ ಮಾಗಿಯ ಕಾಲ ಬರುತ್ತದೆ. ಅವರ್ಯಾರೋ? ಇವರ್ಯಾರೋ? ಆಸೆಗಳು ವಿಭಿನ್ನ, ಗುರಿಯಂತೂ ಉತ್ತರಾಯಣ ದಕ್ಷಿಣಾಯನ.
ನಸುನಗುವಿನಿಂದ ಕಸಿ ಕಟ್ಟುವ ಸ್ನೇಹ ಹೃದಯದಲ್ಲಿ ಬೇರನ್ನು ಬಿಟ್ಟು ಸಾಯುವವರೆಗೂ ನೆನಪಿನ ಫಲ ನೀಡುತ್ತದೆ. ಸತ್ತರೂ ಅದು ಅಮರವಾಗಿ ನಮ್ಮ ಆತ್ಮೀಯರ ಬಾಯಲ್ಲಿ ಪದವಾಗಿ ಹೊಮ್ಮುತ್ತದೆ. ಒಂದು ಸಣ್ಣ ಖುಷಿಗಾಗಿ ಗುಟುಕಿಸಿದ ಶುಗರ್‍ಲೆಸ್ ಟಿ ನಮ್ಮ ಬಾಳಿನ ತುಂಬಾ ಸಿಹಿಸಕ್ಕರೆಯಂತಾ ಅನುಭವವನ್ನು ತಂದೊಡ್ಡುತ್ತದೆ.
ಗೆಳತನಕ್ಕೆ ಗಂಟು ಬಿದ್ದಾಗ ಹಸಿಮನಸ್ಸು ಅಂಟಿಕೊಂಡು ಮನೆಯವರ ನೆನಪು ಮರೆಯುವಂತೆ ಕುಳಿತ ಕಲ್ಲಿನಬೆಂಚಿಗೂ ಬೇಸರವಾಗುವಂತೆ ಅಲ್ಲಿ ಲೋಕಾಭಿರಾಮದ ಮಾತು ತುಂಬಾ ಅಪಾಯ್ಯಮಾನವಾಗಿರುತ್ತದೆ. ಅಲ್ಲಿ ಆಡಿದ ಮಾತು, ಮಾಡಿದ ಜಗಳ, ಬೇಸರವಾದಾಗ ನೆನಪಿನ ಅಂಗಳಕ್ಕೆ ತಂದಾಗ ತುಟಿಗಳು ತನ್ನಷ್ಟಕ್ಕಕ್ಕೆ ತಾನೇ ನಸುನಗುತ್ತವೆ. ತಪ್ಪಲ್ಲದ ತಪ್ಪಿಗೆ ಕಾಲು ಕೆರೆದುಕೊಂಡು ಮಗುವಿನಂತೆ ರಚ್ಚೆ ಹಿಡಿದು ಹುಸಿಮುನಿಸು ತೋರುವ ಮುಖದಲ್ಲಿ ಯಾವ ಲಜ್ಜೆಯೂ ಇಲ್ಲದೆ ಪುಟ್ಟ ಮಗುವಿನಂತೆ ನಗುವೊಂದು ಪುಟಿಯುತ್ತದೆ ಮೆಲ್ಲಗೆ.
ಹಗಲುರಾತ್ರಿಯೆಲ್ಲಾ ಮೇಸೆಜ್ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ, ಆಪ್ತರಾಗುವ ಕ್ರಿಯೆ ನೋಡನೋಡವಷ್ಟರಲ್ಲಿ ಗಾಡವಾದ ಸಂಬಂಧ ಬೆಳದು ಆಲದಮರದ ಬಿಳಲಿನಂತೆ ವಿಶಾಲವಾಗಿ…

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ
ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ

ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ
ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ

ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ
ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ

ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ
ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ

ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ
ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ

ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ
ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ


-    ಸಂಗಮೇಶ ಡಿಗ್ಗಿ
8553550012